ಧಾರ್
ಮಧ್ಯ ಪ್ರದೇಶ ರಾಜ್ಯದ ಇಂದೂರು ವಿಭಾಗದ ಒಂದು ಪಟ್ಟಣ; ಒಂದು ಜಿಲ್ಲೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಈ ಹೆಸರಿನ ಒಂದು ದೇಶೀಯ ಸಂಸ್ಥಾನವಿತ್ತು, ಇಂದೂರಿನ ದಕ್ಷಿಣಕ್ಕೆ 55 ಕಿಮೀ. ದೂರದಲ್ಲಿ ಉ.ಅ. 220 360 ಮತ್ತು ಪೂ.ರೇ. 750 26' ಮೇಲೆ ಇರುವ ಧಾರ್. ವೈವಿಧ್ಯಮಯ ನಿಸರ್ಗದ ಮಡಿಲಲ್ಲಿ ನಿಂತಿರುವ ಈ ಪಟ್ಟಣದ ಸುತ್ತಲೂ ಹಸಿರು ಗಿಡಮರಗಳೂ ನಡುನಡುವೆ ಸುಂದರವಾದ ಸರೋವರಗಳು ಇವೆ. ಹಿನ್ನಲೆಯಲ್ಲಿ ವಿಂಧ್ಯಾದ್ರಿಯ ಶ್ರೇಣಿಗಳಿವೆ. ಇದೊಂದು ಪ್ರಾಚೀನ ಪಟ್ಟಣ. 9ನೆಯ ಶತಮಾನದಿಂದ ಇದು ಮಾಳವದ ರಜಪೂತ ದೊರೆಗಳ ರಾಜಧಾನಿಯಾಗಿತ್ತು. ಭೋಜರಾಜನ (1018-60) ಆಳ್ವಿಕೆಯ ಕಾಲದಲ್ಲಿ ಇದೊಂದು ಮುಖ್ಯ ವಿದ್ವತ್ ಕೇಂದ್ರವಾಗಿತ್ತು. 14ನೆಯ ಶತಮಾನದಲ್ಲಿ ಇದು ಮುಸ್ಲಿಮರ ಆಕ್ರಮಣಕ್ಕೆ ಒಳಗಾಯಿತು. ಮೊಗಲರ ಸಾಮ್ರಾಜ್ಯದಲ್ಲಿ ಸೇರಿದ್ದ ಇದನ್ನು 1730ರಲ್ಲಿ ಮರಾಠರು ಜಯಿಸಿದರು. ಅನಂತರ ಈ ಪಟ್ಟಣ ಧಾರ್ ಸಂಸ್ಥಾನದ ರಾಜಧಾನಿಯಾಯಿತು.   							(ಕೆ.ಕೆ.)

	ಹದಿನಾಲ್ಕನೆಯ ಶತಮಾನದಲ್ಲಿ ಮಹಮ್ಮದ್ ಬಿನ್ ತುಗಲಕ್ ಕಟ್ಟಿಸಿದ ಕೆಂಪು ಕೋಟೆ, 1405ರಲ್ಲಿ ದಿಲಾವರ್ ಖಾನ್ ಕಟ್ಟಿಸಿದ ಲಾಟ್ ಮಸೀದಿ ಇವು ಇಲ್ಲಿಯ ಕೆಲವು ಐತಿಹಾಸಿಕ ಕಟ್ಟಡಗಳು. ಲಾಟ್ ಮಸೀದಿಯನ್ನು ಜೈನ ದೇವಾಲಯಗಳ ಭಾಗಗಳಿಂದ ನಿರ್ಮಿಸಲಾಯಿತು. ಭೋಜರಾಜನ (1000-55) ಸ್ಮರಣೆಯಾಗಿ ಉಳಿದ ರಾಜ ಭೋಜಶಾಲೆ ಮುಸ್ಲಿಮ್ ದೊರೆಗಳ ಕಾಲಕ್ಕೆ ಭೋಜಶಾಲಾ ಮಸೀದಿಯಾಗಿ ಮಾರ್ಪಟ್ಟಿತು. ಇದು ನಗರದ ಇನ್ನೊಂದು ಪ್ರಮುಖ ಆಕರ್ಷಣೆ. ಈ ಮಸೀದಿಯ ನೆಲಗಟ್ಟಿನ ಕಲ್ಲುಗಳ ಮೇಲೆ ಸಂಸ್ಕøತ ವ್ಯಾಕರಣದ ಸೂತ್ರಗಳನ್ನು ಕೆತ್ತಲಾಗಿದೆ. ಧಾರ್ ಪಟ್ಟಣ ಕೃಷಿ ಉತ್ಪನ್ನಗಳ ಒಂದು ವ್ಯಾಪಾರಸ್ಥಳ, ಹತ್ತಿ ಹಿಂಜುವುದು, ಕುಶಲ ನೇಯ್ಗೆ ಇವು ಮುಖ್ಯ ಕಸುಬುಗಳು. ಇಲ್ಲಿಂದ ಇಂದೂರಿಗೆ ರಸ್ತೆ ಸಂಪರ್ಕವಿದೆ. ಇಲ್ಲಿ ಗ್ರಂಥಾಲಯ, ಆಸ್ಪತ್ರೆ, ಸಂಗೀತ, ಶಾಲೆ, ವಿಕ್ರಮ್ ವಿಶ್ವವಿದ್ಯಾಲಯಕ್ಕೆ ಸೇರಿದ ಒಂದು ಕಾಲೇಜು ಇವೆ.

	ಧಾರ್ ಜಿಲ್ಲೆಯ ವಿಸ್ತೀರ್ಣ 8153 ಚ.ಕಿಮೀ. ಜನಸಂಖ್ಯೆ 13,66,626 (2001). ಪ್ರತಿ ಚ.ಕಿ.ಮೀ ಗೆ 103 ರಂತೆ ಜನಸಾಂದ್ರತೆ ಇರುವ ಈ ಜಿಲ್ಲೆಯಲ್ಲಿ ಸಾಕ್ಷರತೆ ಸೇ.17 ಮಾತ್ರ. ಧಾರ್, ಇಂದೂರು ಮತ್ತು ಗ್ವಾಲಿಯರ್ ಸಂಸ್ಥಾನಗಳ ಭಾಗಗಳನ್ನು ಸೇರಿಸಿ ಧಾರ್ ಜಿಲ್ಲೆಯನ್ನು ರಚಿಸಲಾಯಿತು. ವಿಂಧ್ಯಾದ್ರಿಯ ನೆರಳಿನಲ್ಲಿರುವ ಈ ಜಿಲ್ಲೆಯ ಮಣ್ಣು ಸಾಮಾನ್ಯವಾಗಿ ಹರಳು ಕಲ್ಲುಗಳಿಂದ ಕೂಡಿದ್ದು, ಮಾಹೀ, ನರ್ಮದಾ ಮತ್ತು ಚಂಬಲ್ ನದಿಗಳಿಂದ ನೀರಾವರಿ ಸೌಲಭ್ಯ ಒದಗಿದೆ. ವಾರ್ಷಿಕ ಸರಾಸರಿ ಮಳೆ 76 ಸೆಂ.ಮೀ. ಮೆಕ್ಕೆಜೋಳ, ಕಬ್ಬು, ಜೋಳ, ಸಜ್ಜೆ, ಹತ್ತಿ, ಗೋಧಿ, ಹೊಗೆಸೊಪ್ಪು ಇವು ಇಲ್ಲಿಯ ಮುಖ್ಯ ಬೆಳೆಗಳು. ಜಿಲ್ಲೆಯ ಹತ್ತಿಯ ಗಿರಣಿಗಳೂ ಬೀಡಿಯ ಕಾರ್ಖಾನೆಗಳೂ ಇವೆ. ಹಿತ್ತಾಳೆ ಪಾತ್ರೆಗಳ ತಯಾರಿಕೆಯೂ ಇಲ್ಲಿಯ ಒಂದು ಮುಖ್ಯ ಕೈಗಾರಿಕೆ.

	ಬ್ರಿಟಿಷರ ಆಶ್ರಯದಲ್ಲಿ ಧಾರ್ ಸಂಸ್ಥಾನ 1742ರಲ್ಲಿ ಸ್ಥಾಪಿತವಾಯಿತು. ಇದರ ಸ್ಥಾಪಕ ಆನಂದರಾವ್ ಪನ್ವಾರ್ ಎಂಬ ಮರಾಠಾಧಿಪತಿ. ನರ್ಮದಾ ಕಣಿವೆಯಲ್ಲಿದ್ದ ಈ ಸಂಸ್ಥಾನದಲ್ಲಿ ಹಲವು ರಜಪೂತ ಮತ್ತು ಭಿಲ್ ಪಾಳೆಯ ಪಟ್ಟುಗಳು ಸೇರಿದ್ದುವು. ಭಾರತ ಸ್ವತಂತ್ರವಾದ ಮೇಲೆ 1948ರಲ್ಲಿ ಇದು ಮಧ್ಯಭಾರತ ರಾಜ್ಯದಲ್ಲಿ ವಿಲೀನಗೊಂಡಿತು. ಸುತ್ತಮುತ್ತಣ ಕೆಲವು ಪ್ರದೇಶಗಳೊಂದಿಗೆ ಇದನ್ನು ಸೇರಿಸಿ ಜಿಲ್ಲೆ ರಚಿತವಾಯಿತು. ಅನಂತರ ಇದು ಮಧ್ಯ ಪ್ರದೇಶ ರಾಜ್ಯದಲ್ಲಿ ಮುಂದುವರಿಯಿತು.

	ಪಂಜಾಬಿನಲ್ಲಿ ಉ.ಅ. 310 6' ಮತ್ತು ಪೂ.ರೇ. 770 46' ಮೇಲೆ ಧಾರ್ ಎಂಬ ಹೆಸರಿನ ಗ್ರಾಮವೊಂದಿದೆ. ಮಹಾರಾಷ್ಟ್ರದಲ್ಲೂ ಔರಂಗಾಬಾದಿನಿಂದ 90 ಕಿಮೀ. ಮತ್ತು ಜಾಲನಾದಿಂದ 45 ಕಿಮೀ. ದೂರದಲ್ಲಿ, ಉ.ಅ. 200 23' ಮತ್ತು ಪೂ.ರೇ 760 4' ನಲ್ಲಿ ಒಂದು ಗ್ರಾಮವುಂಟು.							(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ